ವಿಚಾರ ಜ್ಯೋತಿ ಚುನಾವಣೆ ಅರ್ಥಪೂರ್ಣವಾಗುವುದೆಂದು?

1952 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆಯಿತು. ಅದರ ನಂತರ ಒಂದಲ್ಲ ಒಂದು ಚುನಾವಣೆ ಇದ್ದೇ ಇರುತ್ತದೆ. ಹೀಗೆ ಚುನಾವಣೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ.
ಆದರೆ ಕಾಲ ಬದಲಾದಂತೆ ನಮ್ಮ ಪ್ರಜಾ ಪ್ರಭುತ್ವಕ್ಕೂ ವಯಸ್ಸಾದಂತೆ, ನಮ್ಮ ಮತದಾರರು ಎಷ್ಟರ ಮಟ್ಟಿಗೆ ಪ್ರಭುದ್ದರಾಗಿದಾರೆ? ನಿಜ ನಮ್ಮ ಪ್ರಸ್ತುತ ಸಂವಿಧಾನ ರೀತ್ಯ 18 ವರ್ಷ ವಯಸ್ಸಾದವರೆಲ್ಲರೂ ಮತ ಚಲಾವಣೆಗೆ ಅರ್ಹರು. ಈ ವಯಸ್ಕ ಮತದಾನ ಪದ್ಧತಿ ಒಂದು ಉತ್ತಮ ಪದ್ಧತಿ ಎಂಬುದರಲ್ಲಿ ಅನುಮಾನವಿಲ್ಲ ಆದರೆ ಇಲ್ಲಿ ಕೆಲವು ತೊಡಕುಗಳಿವೆ. ನಿಜಕ್ಕೂ ನಮ್ಮ ಚುನಾವಣೆ ಪದ್ಧತಿ ಅರ್ಥಪೂರ್ಣವಾಗಬೇಕಾದರೆ ಈ ತೊಡಕುಗಳು ನಿವಾರಣೆಯಾಗಬೇಕು.
ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಲ್ಲಿ ಹೊಸ ಹುರುಪು ಇತ್ತು. ಅಂಥ ಕೇಳಿರುವೆ ರಾಜಕೀಯ ವ್ಯವಸ್ಥೆ ಇಂದಿನಷ್ಟು ಭ್ರಷ್ಟಗೊಂಡಿರಲಿಲ್ವಂತೆ. ಸ್ವಾತಂತ್ರ್ಯ ಬಂದ ಹೊಸತು ಹೊಸನಾಡೊಂದನ್ನು ಕಟ್ಟಲು ಚಿಮ್ಮುತ್ತಿದ್ದ ಉತ್ಸಾಹ. ಕೆಲವು ನಾಯಕರ ಮನಸ್ಸುಗಳು ಸ್ವಾರ್ಥ ಪಿಪಾಶಿಯಿಂದ ಸ್ವಲ್ಪ ಮಟ್ಟಿಗೆ ಕಲೂಷಿತಗೊಂಡಿದ್ದರೂ ಕೆಲವು ಮೌಲ್ಯಗಳು, ಆದರ್ಶಗಳು ಸ್ಪೂರ್ತಿ ಮಾಯವಾಗಿರಲಿಲ್ಲ. ಹೀಗಾಗಿ ಆ ದಿನಗಳ ಮಟ್ಟಿಗೆ ಒಳ್ಳೆಯ ರಾಷ್ಟ್ರೀಯ ನಾಯಕತ್ವವನ್ನೂ ಸೌಲಭ್ಯಗಳನ್ನು ಸಂಘಟನೆಯನ್ನೂ ಹೊಂದಿದ್ದ ಕಾಂಗ್ರೇಸ್ ಚುನಾವಣೆಗಳ ಮೂಲಕ ಅಧಿಕಾರವನ್ನು ಪಡೆದುಕೊಳ್ಳುವದರಲ್ಲಿ ಯಶಸ್ವಿಯಾಯಿತು. ಸರ್ಕಾರ ನಡೆಸುವ, ತನ್ಮೂಲಕ ದೇಶವನ್ನು ಆಳುವ ಅವಕಾಶ ಪಡೆಯಿತು. ಪಂ. ಜವಹರಲಾಲ್ ನೆಹರು ಮೊದಲ ಪ್ರಧಾನ ಮಂತ್ರಿ ಆದರು.
ಆದರೆ ಅಂದಿನಿಂದ ಇಂದಿನವರೆಗೆ ಗಂಗೆಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅದೇಷ್ಟೋ ಚುನಾವಣೆಗಳಾಗಿವೆಯೋ ಸಹಜವಾಗಿ ಈ ವೇಳೆಗೆ ಪ್ರಜಾಪ್ರಭುತ್ವ ಪದ್ಧತಿ ಪರಿಪಕ್ವಗೊಳ್ಳಬೇಕಿತ್ತು. ಆದರೆ ದುರದುಷ್ಟ. ಅದು ಹಾಗಾಗಲಿಲ್ಲ ನಾಯಕರೇ ಎಲ್ಲ ಮೌಲ್ಯಗಳನ್ನೂ ಗಾಳಿಗೆ ತೂರಿದರು. ಚುನಾವಣೆ ಗೆಲ್ಲುವುದೊಂದನ್ನೇ ಮುಖ್ಯವಾಗಿರಿಸಿಕೊಂಡರು. ಹೀಗೆ ಮತದಾರನ ಅಧಃಪತನಕ್ಕೆ ಅವರೇ ಕಾರಣ ಕರ್ತರಾದದ್ದು ಒಂದು ದುರಂತ.
ಮೊದಲ ಚುನಾವಣೆಗಳಲ್ಲಿ ಮತದಾರನ ಮುಂದೆ ಅಷ್ಟು ಅಮಿಷಗಳಿರಲಿಲ್ಲ. ಆಗಿನಿಂದಲೇ ಓಟಿನ ಹಿರಿಮೆಯನ್ನು, ಮೌಲ್ಯವನ್ನು, ಪಾವಿತ್ರ್ಯವನ್ನು ವಿವರಿಸಿ ಮತದಾರನ ಮನಸ್ಸಿನಲ್ಲಿ ಅದರ ಮಹಾನತೆಯ ಅರಿವನ್ನು ತುಂಬಬೇಕಿತ್ತು. ಅದಕ್ಕಾಗಿ ಸಾಕಷ್ಟು ಪ್ರಯತ್ನ ಆಗಲಿಲ್ಲ ಚುನಾವಣಾ ಆಯೋಗಗಳು ಚುನಾವಣೆ ಪ್ರಕ್ರಿಯೆ ನಡೆಸುವುದಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದವು. ಅಕ್ರಮಗಳನ್ನು ತಡೆಗಟ್ಟಲು ಕೆಲವು ಪ್ರಯತ್ನಗಳನ್ನೂ ಮಾಡಿದವು. ಆದರೆ ಒಟ್ಟಾರೆ ಪರಿಣಾಮ ಅಷ್ಟಕ್ಕೆಷ್ಟೆ.
ಇನ್ನೊಂದು ಕಡೆ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಮತದಾರನನ್ನು ಕುಲಗೆಡಿಸಲು ಆರಂಭಿಸಿದರು. ಮೊಟ್ಟ ಮೊದಲನೆಯಾಗಿ ಅವರನ್ನು ಜಾತಿ, ಕೋಮು, ಮತಗಳ ರೀತ್ಯಾ ವಿಭಜಿಸಿದರು. ಅದಕ್ಕೆ ಪ್ರಚೋದನೆ ನೀಡಿದರು. ಕೆಳ ವರ್ಗಗಳ ಮತದಾರರನ್ನು ಹೆಂಡದ ಹೊಳೆ ಹರಿಸಿಕೊಂಡರು. ಹಣ ವಿತರಿಸಿ ಫಲಿಸಿಕೊಂಡರು. ಕಾಲ ಸಂದಂತೆ ಈ ದುರಭ್ಯಾಸಗಳು ಬಲವಾಗಿ ತಳವೂರಿದ್ದವು. ಚುನಾವಣೆಗಳು ಬಂದವೆಂದರೆ ಕೆಳವರ್ಗದ ಜನ ರಾಜಕಾರಣಿಗಳ ಹಣ ಹೆಂಡಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯಲಾರಂಭಿಸಿದರು. ನಾಯಕ ಮಣಿಗಳೆಂದು ಕರೆಸಿಕೊಂಡಂಥವರಿಗೆ ಯಾವುದೇ ಎಗ್ಗಿಲ್ಲದಿರುವಾಗ ಅನಕ್ಷರಸ್ಥರೂ ಅಶಿಕ್ಷಿತರೂ ಆದ ಮತದಾರನಿಗೆಲ್ಲಿಂದ ಬರಬೇಕು? ಅವನ ಧರಾತಳಕ್ಕೆ ಕುಸಿಯುವಂತೆ ಮಾಡುವುದರಲ್ಲಿ ರಾಜಕಾರಣಿಗಳ ಕೊಡುಗೆ ಅಪಾರ ವೇದಿಕೆಯ ಮೇಲೆ ಎದ್ದುದ್ದು, ಉಪದೇಶಗಳನ್ನು ಮಾಡಿ ಆದರ್ಶಗಳನ್ನು ಉದ್ಘೋಷಿಸುವ ಮಹಾ ಮಹಾ ನಾಯಕರೂ ತಮ್ಮ ಚೇಲಾಗಳನ್ನು ಮಾಡುತ್ತಿದ್ದ ಅನಾಚಾರಗಳಿಗೆ ಮೌನ ಸಮ್ಮತಿ ನೀಡಿ ಏನೂ ಅರಿಯದಂತೆ ತೆಪ್ಪಗಿದ್ದರು. ಓಟುಗಳಿಗಾಗಿ ತಮ್ಮ ಚೇಲಾಗಳು ಮಾಡುತ್ತಿದ್ದ ದುಷ್ಕøತ್ಯಗಳನ್ನು ಅವ್ಯವಹಾರಗಳನ್ನು ಪ್ರತಿಭಟಿಸಿ ಚುನಾವಣೆಯಿಂದ ದೂರ ಸರಿದ ನಿಯತ್ತಿನ ಅಭ್ಯರ್ಥಿಯು ಉದಾಹರಣೆ ಇಲ್ಲಿಯವರೆಗೂ ಒಂದೇ ಒಂದೂ ಇಲ್ಲ. ಇವರದು ಪುರಾಣ ಹೇಳಲಿಕ್ಕೆ ಬದನೆಕಾಯಿ ತಿನ್ನಲಿಕ್ಕೆ ಎಂಬ ಸಿದ್ಧಾಂತ.
ಈ 2018 ನಾವು ಕರ್ನಾಟಕ ವಿಧಾನಸಭಾ ಚುನಾವಣೆಗಳನ್ನು ಮುಗಿಸಿ 2019 ರ ಲೋಕಸಭಾ ಚುನಾವಣೆಗಳ ಮಧ್ಯದಲ್ಲಿದ್ದೇವೆ. ಈಗ ಭಯಂಕರ ಹಣಾಹಣೆ ನಡೆಯುತ್ತಿದೆ. ನಾಯಕರು, ನಾಯಕಿಯರು, ಪರಸ್ಪರ ವಾಗ್ಬಾಂಬುಗಳನ್ನು ಪ್ರಯೋಗಿಸುವುದರಲ್ಲಿ ನಿರತರಾಗಿದ್ದಾರೆ. ಕೆಲವರು ಟಿ.ವಿ ಕ್ಯಾಮರಾಗಳ ಮುಂದೆ ಗೋಳೊ ಎಂದು ಅಳುತ್ತಾ ಮತದಾರರ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಮತಗಳಿಗಾಗಿ ಪ್ರಚಾರ ಮಾಡುತ್ತಿರುವ ರೀತಿ ದೇವರಿಗೆ ಪ್ರೀತಿ, ಎದುರಾಳಿ ಅಭ್ಯರ್ಥಿಗಳ ಮೇಲೆ ಆರೋಪ ಪ್ರತ್ಯಾರೋಪ ಮಾಡುವುದರಲ್ಲಿ ಉಮೇದುವಾರರು ಅತ್ಯಂತ ಕೀಳು ಮಟ್ಟಕ್ಕಿಳಿದಿರುವುದೇ ಉಂಟು. ಒಂದು ಟಿ.ವಿ ಕಾರ್ಯಕ್ರಮದಲ್ಲಿ ಒಬ್ಬ ಅಭ್ಯರ್ಥಿ ತನ್ನ ಎದುರಾಳಿಯ ಮೇಲೆ “ನೀನು ಇಷ್ಟು ಹಣ ದೋಚಿದ್ದಿಯಾ ನೀನು ಇಷ್ಟು ಹೆಣ್ಣು ಮಕ್ಕಳನ್ನು ಅವಮಾನಿಸಿದ್ದೀಯಾ” ಎಂದು ಆರೋಪಿಸಿದಾಗ ನೀನೇನು ಕಡಿಮೆ? ನನ್ನ ವೈಯಕ್ತಿಕ ವಿಷಯಗಳಿಗೆ ಕೈ ಹಾಕಬೇಡ” ಎಂದು ಆ ಎದುರಾಳಿ ಉತ್ತರಿಸಿದ್ದು ಇದೆ. ನಮ್ಮ ಅಭ್ಯರ್ಥಿಗಳ ಯೋಗ್ಯತೆ ಹಾಗೂ ಅವರಳಿಯುವ ಮಟ್ಟಗಳನ್ನು ತೋರಿಸಲು ಇದೊಂದು ಸಣ್ಣ ಸ್ಯಾಂಪಲ್ ಇಂತಹವು ಸಾವಿರ ಸಾವಿರ ಉದಾಹರಣೆಗಳು ಸಿಗುತ್ತವೆ. ಮತದಾರರೆ.
ಇದೆಲ್ಲದರ ನಡುವೆ ಈ ಬಾರಿ ಲೋಕಸಭಾ ಚುನಾವಣೆಗಳಲ್ಲಿ ಒಂದು ಸಣ್ಣ ಬೆಳ್ಳಿ ರೇಖೆ ಕಂಡುಬಂದಿವೆ. ಅದೇ ಚುನಾವಣಾ ಆಯೋಗದ ಪರಿಣಾಮಕಾರಿ ಕ್ರಿಯಾಶೀಲತೆ, ಕಾರ್ಯಚರಣೆ ಪ್ರತಿ ಸಾರಿಯಂತೆ ಈ ಬಾರಿಯ ಚುನಾವಣೆಗಳಲ್ಲಿ ಪ್ರತಿ ಅಭ್ಯರ್ಥಿಯೂ, ತನ್ನ ಆಸ್ತಿಪಾಸ್ತಿಗಳನ್ನು ಘೋಷಿಸಬೇಕೆಂಬ ನಿಯಮ ಬಂದು ಅಭ್ಯರ್ಥಿಗಳ ಪೈಕಿ ಎಂತೆಂಥ ಕುಳುಗಳು ಇದ್ದಾರೆಂಬುದು ಜಗಜ್ಜಾಹಿರವಾಗಿದೆ. ಅವರುಗಳು ಘೋಷಿಸುವಂತೆಯೇ ಅನೇಕರು ಕೋಟ್ಯಾಧೀಪತಿಗಳೂ, ದೇಶದÀ ಮಟ್ಟಿಗಂತೂ ಒಬ್ಬಿಬ್ಬರು ಪ್ರಮುಖ ಅಭ್ಯರ್ಥಿಗಳನ್ನು ಬಿಟ್ಟರೆ ಬಹುಪಾಲು ಮುಖ್ಯ ಅಭ್ಯರ್ಥಿಗಳು ಕೋಟಿ, ಅಬ್ಜಗಳ ಆಸ್ತಿವಂತರು. ಇದು ಅವರು ಬಹಿರಂಗ ಪಡಿಸಿರುವ ಮೊತ್ತವಾದರೆ, ಇನ್ನೂ ಘೋಷಿಸದೆ ಇರುವುದು ಎಷ್ಟೋ! ಕೋಟಿ ಕೋಟಿ ಹಣ ಆಸ್ತಿ.
ಚುನಾವಣಾ ಆಯೋಗದ ಬಿಗಿ ಮುಷ್ಠಿಯಿಂದ ಅನೇಕ ಅಕ್ರಮಗಳಿಗೆ ತಡೆ ಬೀಳುತ್ತಿದೆ. ಹೆಂಡ, ಹಣ, ಸೀರೆ, ಗ್ರಹೋಪಯೋಗಿ ವಸ್ತುಗಳು, ಗೊತ್ತಿಲ್ಲದೇ ಗುಡಿ-ಮಠ-ಮಂದಿರಗಳಿಗೆ, ಕೊಡುವಂತಹ ಮುಂತಾ ವಸ್ತುಗಳು ಹಿಡಿಯಲ್ಪಟ್ಟಿವೆ. ಇನ್ನೂ ಹಿಡಿಯುತ್ತಲಿದ್ದಾರೆ. ಹಿಂದೆ ಗುರುತಿನ ಚೀಟಿ ಬೇಕಾಬಿಟ್ಟಿಯಾಗಿ ವಿತರಣೆ ಕೆಲಸ ನಡೆಯುತ್ತಿತ್ತು. ಈಗ ಅದು ಬಹಳಷ್ಟು ಸುಧಾರಿಸಿದೆ. ಗುರುತಿನ ಚೀಟಿಯ ಬದಲು ಇತರ ಪುರಾವೆಗಳನ್ನು ತೋರಿಸಿ ಮತ ಚಲಾಯಿಸುವ ಅನಕೂಲ ಮಾಡಿಕೊಡಲಾಗಿದೆ. ಚುನಾವಣಾ ಆಯೋಗದ ಸಿಬ್ಬಂದಿ ಮೈಯಲ್ಲಾ ಕಣ್ಣಾಗಿ ದುಡಿಯುತ್ತಿರುವುದು ಬಹಳಷ್ಟು ಅಭ್ಯರ್ಥಿಗಳಿಗೆ ಉಸಿರು ಕಟ್ಟುವ ವಾತವರಣವನ್ನು ನಿರ್ಮಿಸಿದಂತಾಗಿದೆ. ಅಂತೆಯೇ ಅವರು ಸಿಕ್ಕಾ ಪಟ್ಟೆ ಹಣ ಖರ್ಚು ಮಾಡಲಿಕ್ಕೆ ಆಸ್ಪದವಿಲ್ಲ. ಹೀಗಾಗಿ ಹತ್ತಾರು ನಿರ್ಭಂಧಗಳು! ಅವುಗಳ ನಡುವೆಯೇ ಚುನಾವಣೆ. ಆದರೆ ಆಯೋಗ ಚಾಪೆ ಕೆಳಗೆ ನುಗ್ಗಿದರೆ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುವಷ್ಟು ಫಟಿಂಗರಿರುತ್ತಾರೆ. ಯೋಜನೆಗೆ ಪ್ರತಿ ಯೋಜನೆ ಮಾಡುವ ದೂರ್ತ ಶಕುನಿಗಳಿರುತ್ತಾರೆ.
ಸಧ್ಯದ ಲೋಕಸಭಾ ಚುನಾವಣೆ ಮುಗಿಯುತ್ತದೆ. ಯಾರೋ ಗೆದ್ದು ಸರ್ಕಾರ ರಚಿಸುತ್ತಾರೆ. ಆದರೆ ಮುಂಬರುವ ಚುನಾವಣೆಗಳನ್ನು ಕುರಿತು ಆಲೋಚಿಸಬೇಕಾಗಿದೆ. ಯಾವುದೇ ಸರ್ಕಾರ ಬರಲಿ, ಯಾರೇ ನಾಯಕರಾಗಲಿ ಮತದಾರನಿಗೆ ಪ್ರಜಾಪ್ರಭುತ್ವದ ಹಿರಿಮೆಯನ್ನು ತಿಳಿಸವಂತಹ ಕಾರ್ಯಕ್ರಮ ಏರ್ಪಡಿಸಬೇಕಾಗಿದೆ. ಪ್ರತಿಯೊಂದು ಮತದ ಹಿಂದೆ ಸಾಕಷ್ಟು ಚಿಂತನ, ಮಂಥನ, ಮೌಲ್ಯ ಮಾಪನ ನಡೆದಿರಬೇಕು. ಹಾಗೇ ಶಾಲಾ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಹಾಗೆ ಬಳಸಿಕೊಳ್ಳುವಂತಹ ಪಕ್ಷಗಳ ಅಭ್ಯರ್ಥಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಮತದಾರ ಯಾವ ಆಮಿಷಗಳಿಗೂ ಭಯಕ್ಕೂ ಒತ್ತಡಗಳಿಗೂ ಮಣಿಯದೆ ಸಂಪೂರ್ಣ ಸ್ವಂತ ಇಚ್ಛೆಯಿಂದ ಮತ ಚಲಾವಣೆಯ ದಿನಗಳು ಬರುವಂತಾಗಬೇಕು. ಆ ದಿನ ಬರಲೇಬೇಕು. ಬೇಗ ಬರುವಂತಾಗಬೇಕು.

-ಲೇಖನ
ಕುಮಾರಿ:- ಚೈತ್ರಾ ಅ ವಿಶ್ವಬ್ರಾಹ್ಮಣ(ಮುದಗಲ್ಲ್)
ಹವ್ಯಾಸಿ ಬರಹಗಾರ್ತಿ.
ಅಂಚೆ ಗಜೇಂದ್ರಗಡ ಜಿ-ಗದಗ

Leave a Reply

Your email address will not be published. Required fields are marked *

Pin It on Pinterest