ಡಾ| ಯು.ಬಿ. ಪವನಜ

ತುಳು ವಿಕಿಪೀಡಿಯ ಈಗ ಸಿದ್ಧ

08:48:05 AM / Wed, Feb 21st, 2018

ತುಳು ಭಾಷೆಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಬಹುಮಟ್ಟಿಗೆ ಬಾಯಿಮಾತಿನ ಭಾಷೆಯಾಗಿಯೇ ಉಳಿದು ಬೆಳೆದು ಬಂದಿದೆ. ತುಳು ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ ಅಡಕವಾಗಿದೆ. ತುಳು ಭಾಷೆಯಲ್ಲಿ ಹಳೆಯ ಪಾಡ್ದನ ಮತ್ತು ಇತರೆ ಸಾಹಿತ್ಯಗಳಲ್ಲದೆ ಆಧುನಿಕ ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿ ಕಥನ ಸಾಹಿತ್ಯವೂ ಬೇಕಾದಷ್ಟು ಸೃಷ್ಠಿಯಾಗಿದೆ. ತುಳು ಭಾಷೆಯಲ್ಲಿ ನಾಟಕ ಪ್ರದರ್ಶನ ಮತ್ತು ಚಲನಚಿತ್ರಗಳೂ ಆಗುತ್ತಿವೆ. ತುಳುನಾಡು ಮತ್ತು ತುಳು ಭಾಷೆಯ ಬಗ್ಗೆ ಹಲವಾರು ಸಂಶೋಧನೆಗಳು ಆಗಿವೆ ಮಾತ್ರವಲ್ಲ ಅವುಗಳು ಪುಸ್ತಕರೂಪದಲ್ಲೂ ಲಭ್ಯವಿವೆ. ಆದರೆ ಒಂದು ದೊಡ್ಡ ಕೊರತೆ ಎಂದರೆ ತುಳು ಭಾಷೆಯಲ್ಲಿ ಯಾವುದೇ ವಿಶ್ವಕೋಶ ತಯಾರಾಗಿಲ್ಲ. ಅಷ್ಟು ಮಾತ್ರವಲ್ಲ ವಿಶ್ವಕೋಶ ಶೈಲಿಯ ಮಾಹಿತಿ ಸಾಹಿತ್ಯ ವರ್ಗದ ಪುಸ್ತಕಗಳ ಸಂಖ್ಯೆ ತುಳು ಭಾಷೆಯಲ್ಲಿ ಅತಿ ಕಡಿಮೆ.

ಒಂದು ಭಾಷೆ ಉಳಿದು ಬೆಳೆಯಬೇಕಾದರೆ ಅದನ್ನು ಜನರು ಬಳಸುವುದು ಅತೀ ಮುಖ್ಯ. ಜನರು ಭಾಷೆಯನ್ನು ಬಳಸಬೇಕಾದರೆ ಅವರಿಗೆ ಆ ಭಾಷೆಯಲ್ಲಿ ದಿನನಿತ್ಯದ ವ್ಯವಹಾರಕ್ಕೆ ಅತೀ ಅಗತ್ಯವಾದ ಮಾಹಿತಿ ದೊರೆಯುವುದೂ ಅಷ್ಟೇ ಮುಖ್ಯವಾಗುತ್ತದೆ. ಈ ಮಾಹಿತಿ ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಕೃಷಿ, ಸಂಗೀತ, ಧಾರ್ಮಿಕ, ಇತ್ಯಾದಿ ಯಾವುದೇ ಆಗಿರಬಹುದು. ಸರಳವಾಗಿ ಹೇಳಬೇಕಾದರೆ ಮಾಹಿತಿ ಸಾಹಿತ್ಯದ ಅಗತ್ಯ ಇದೆ. ತುಳು ಭಾಷೆಯಲ್ಲಿ ಇಂತಹ ಸಾಹಿತ್ಯ ಇಲ್ಲವೇ ಇಲ್ಲ.

ಇನ್ನೂ ಒಂದು ವಿಷಯದ ಕಡೆ ಗಮನ ಹರಿಸೋಣ. ತುಳುನಾಡಿನ ಶಾಲೆಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಸೇರಿಸಿದ್ದಾರೆ. ಈ ಭಾಷೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಓದಲು ಪಠ್ಯಪುಸ್ತಕದ ಹೊರತಾಗಿ ಏನಿದೆ? ಕೆಲವು ಕಥೆ, ಕಾದಂಬರಿ, ಕವನ ಸಂಕಲನಗಳಿವೆ ಎಂದು ಕೆಲವರು ಹೇಳಬಹುದು. ಆದರೆ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಸಾಹಿತ್ಯ ಎಷ್ಟಿದೆ? ಎಲ್ಲಕ್ಕಿಂತ ಮುಖ್ಯವಾಗಿ ಅವರ ಪಠ್ಯದಲ್ಲಿ ಇರುವ ವಿಷಯಗಳಿಗೆ ಪೂರಕವಾಗಿ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅವರು ಏನನ್ನು ಓದಬೇಕು? ಅಂತಹ ವಿಷಯಗಳು ತುಳು ಭಾಷೆಯಲ್ಲಿ ಓದಲು ಲಭ್ಯವಿದೆಯೇ? ಉತ್ತರ ನಿರಾಶಾದಾಯಕವಾಗಿದೆ.

ಇಷ್ಟು ಪೀಠಿಕೆಯಿಂದ ಒಂದು ಅಂಶವನ್ನು ನಾವು ಸಾಬೀತುಪಡಿಸಿದಂತಾಯಿತು. ಅದೆಂದರೆ ತುಳು ಭಾಷೆಯಲ್ಲಿ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಪುಸ್ತಕ ಅತೀ ಅಗತ್ಯವಿದೆ ಎಂದು. ಪುಸ್ತಕ ತಯಾರಿಸಿ ಮುದ್ರಿಸಿ ಹಂಚಿದರೂ ಅವು ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಾಗುವುದಿಲ್ಲ. ಮಾತ್ರವಲ್ಲ ಈಗಿನ ಮಾಹಿತಿಯುಗದಲ್ಲಿ ಎಲ್ಲವೂ ಅತೀ ವೇಗದಲ್ಲಿ ಬೆಳೆಯುತ್ತಿರುವಾಗ ಈ ಪುಸ್ತಗಳು ಅಷ್ಟೇ ವೇಗದಲ್ಲಿ ಹೊಸಹೊಸ ವಿಷಯಗಳನ್ನು ತುಂಬಿಕೊಂಡು ನಿಜಸಮಯದಲ್ಲಿ ನವೀಕರಣಗೊಳ್ಳುವುದು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಈ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಮಾಹಿತಿಕೋಶ ಅಂತರಜಾಲದಲ್ಲಿರಬೇಕು ಎಂಬುದು. ಈಗ ಹಳ್ಳಿಹಳ್ಳಿಗಳಲ್ಲೂ ಅಂತರಜಾಲ ಎಲ್ಲರಿಗೂ ಲಭ್ಯವಿದೆ. ಕಡಿಮೆ ಬೆಲೆಗೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳ ಮೂಲಕವೂ ಅಂತರಜಾಲ ವೀಕ್ಷಣೆ ಮಾಡಬಹುದು ಮತ್ತು ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದು. ಹಾಗಿರುವಾಗ ಅಂತರಜಾಲದಲ್ಲಿ ತುಳು ವಿಶ್ವಕೋಶವೊಂದನ್ನು ತಯಾರಿಸುವುದು ಅತೀ ಅಗತ್ಯವಾಗಿದೆ.

ಅಂತರಜಾಲದಲ್ಲಿ ಎಲ್ಲ ಕಾಲಕ್ಕೂ ಎಲ್ಲರಿಗೂ ಲಭ್ಯವಿರುವ ಮಾತ್ರವಲ್ಲ ಎಲ್ಲರೂ ಯಾವುದೇ ನಿರ್ಬಂಧವಿಲ್ಲದೆ ಸಂಪಾದಿಸಬಹುದಾದ ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ. ಜಗತ್ತಿನ ೨೯೪ ಭಾಷೆಗಳಲ್ಲಿರುವ ವಿಕಿಪೀಡಿಯ ೨೦೦೧ರಲ್ಲಿ ಪ್ರಾರಂಭವಾಯಿತು.

Leave A Comment